ನಾಯಿ ಕಜ್ಜಿ -
ಸಾರ್ಕಾಪ್ಟಿಕ್ ಅಥವಾ ಡಿಮೊಡೆಕ್ಟಿಕ್ ಜಾತಿಗೆ ಸೇರಿದ ಪರೋಪಜೀವಿ ನುಸಿಗಳಿಂದ ನಾಯಿಗಳಲ್ಲಿ ಉಂಟಾಗುವ ಒಂದು ಸಾಂಸರ್ಗಿಕ ರೋಗ. ಎಲ್ಲ ಸಾಕುಪ್ರಾಣಿಗಳಲ್ಲೂ ಈ ರೋಗ ಕಂಡುಬರುವುದಾದರೂ ನಾಯಿಗಳಲ್ಲಿ ಇದು ಹೆಚ್ಚು.
ಸಾರ್ಕಾಪ್ಟಿಸ್ ಸ್ಕೇಬಿ ಜಾತಿಯ ಕೇನಿಸ್ ಪ್ರಭೇದ ಮತ್ತು ಡಿಮೊಡೆಕ್ಸ್ ಕೆನಿಸ್ ಜಾತಿಯ ನುಸಿಗಳಿಂದ ನಾಯಿಗಳಲ್ಲಿ ಈ ರೋಗ ಉಂಟಾಗುತ್ತದೆ. ಸಾರ್ಕಾಪ್ಟಿಸ್ ಸ್ಕೇಬಿ ಚರ್ಮದಲ್ಲಿ ತೂತು ಕೊರೆದುಕೊಂಡು ಹೋಗಿ ಮೊಟ್ಟೆ ಇಟ್ಟರೆ, ಡಿಮೊಡೆಕ್ಸ್ ಕೇನಿಸ್ ಚರ್ಮದಲ್ಲಿರುವ ಬೆವರು ಗ್ರಂಥಿ ಅಥವಾ ರೋಮ ಗ್ರಂಥಿಗಳಲ್ಲಿ ಕಂಡುಬರುತ್ತದೆ.

	ಸಾರ್ಕಾಪ್ಟಿಸ್ ನುಸಿ ಚರ್ಮದೊಳಗೆ ತೊತು ಕೊರೆದುಕೊಂಡು ಹೋಗುವುದರಿಂದ ಅಸಾಧ್ಯ ನವೆ ಉಂಟಾಗುತ್ತದೆ. ಇದರಿಂದಾಗಿ ನಾಯಿ ಒಂದೇ ಸವನೆ ಮೈ ಕೆರೆದುಕೊಳ್ಳುವುದು, ಉಜ್ಜುವುದು ಮುಂತಾಗಿ ಮಾಡತೊಡಗುತ್ತದೆ. ಚರ್ಮ ದಪ್ಪಗೆ ಸುಕ್ಕುಗೂಡಿ ಒಣಗುತ್ತದೆ ಹಾಗೂ ಒರಟಾಗುತ್ತದೆ. ರೋಗ ತಗಲಿರುವ ಜಾಗದಲ್ಲಿ ಹೆಕ್ಕಳಿಕೆ ಕಟ್ಟತೊಡಗುತ್ತದೆ. ಸಾಮಾನ್ಯವಾಗಿ ತಲೆಯ ಮೇಲೆ ಕಣು,್ಣ ಕಿವಿ, ಅಥವಾ ಮುಸುಡಿಯ ಸುತ್ತ ಇದು ಕಂಡು ಬಂದು ಮುಂದೆ ಕತ್ತು, ಬೆನ್ನು ಹಾಗೂ ಇಡೀ ದೇಹಕ್ಕೆ ಹಬ್ಬುತ್ತದೆ.

	ಡಿಮೊಡೆಕ್ಸ್ ನುಸಿಯಿಂದ ಉಂಟಾದ ಕಜ್ಜಿ ಹಲವು ರೂಪಗಳಲ್ಲಿ ಕಂಡುಬರಬಹುದು. ಕಣ್ಣಿನ ಸುತ್ತ ಅಥವಾ ದೇಹದ ಯಾವುದೇ ಭಾಗದಲ್ಲಿ ಕೂದುಲುದುರಿದ ಸಣ್ಣ ಮಚ್ಚೆಗಳು ಉಂಟಾಗುವುವು. ಇಲ್ಲವೇ ಮೈ ತುಂಬ ರಕ್ತ ಸುರಿಯುವ ಕಜ್ಜಿ ಕಂಡುಬರಬಹುದು. ಈ ರೀತಿ ಕೂದಲು ಉದುರಿರುವ ಚರ್ಮದಲ್ಲಿ ಉರಿಯೂತದ ಬದಲಾವಣೆಗಳು ಸ್ವಲ್ಪ ಮಾತ್ರ ಕಂಡುಬರುತ್ತವೆ. ಚರ್ಮ ಸ್ವಲ್ಪ ದಪ್ಪಗಾಗುತ್ತದೆ. ಚರ್ಮದಲ್ಲಿ ಹುರುಪೇಳುವಂತಿದ್ದು ಅದು ಒಣ ಸ್ಥಿತಿಯಲ್ಲಿರುತ್ತದೆ. ರಕ್ತ ಒಸರುವ ರೀತಿಯಲ್ಲಿ ಚರ್ಮ ಕೆಂಪಗಾಗಿದ್ದು ರಕ್ತ, ರಕ್ತದ್ರವ ಮತ್ತು ಸೂಕ್ಷ್ಮಾಣು ಜೀವಿಗಳ ಸೋಂಕಿನಿಂದ ಉಂಟಾದ ಕೀವಿನಿಂದ ಕೂಡಿದ ಸ್ರಾವ ಒಸರುತ್ತಿರುತ್ತದೆ. ಚರ್ಮ ದಪ್ಪಗಾಗಿ ತರಚಿಹೋದಂತೆ ಕಾಣುತ್ತದೆ. ರೋಗತಪ್ತ ಜಾಗವನ್ನು ಮುಟ್ಟಿದರೆ ರಕ್ತ ಒಸರುತ್ತದೆ. ಹಾಗೂ ಚರ್ಮದ ಸತ್ತ ಭಾಗ ಉದುರಿಹೋಗುವುದು. ಇಡೀ ಶರೀರ ರೋಗತಪ್ತವಾಗಬಹುದು.

	ಸಾರ್ಕಾಪ್ಟಿಕ್ ನುಸಿಗಳು ಚರ್ಮದೊಳಗೆ ತೂತು ಕೊರೆದುಕೊಂಡು ಇರುವುದರಿಂದ ಹಾಗೂ ಡಿಮೊಡೆಕ್ಸುಗಳು ಬೆವರು ಮತ್ತು ರೋಮಗ್ರಂಥಿಗಳಲ್ಲಿರುವುದರಿಂದ ಪರೀಕ್ಷೆಗೆ ಚರ್ಮದ ಆಳವಾದ ಕೆರೆತವನ್ನು ತೆಗೆದುಕೊಳ್ಳಬೇಕು. ಚರ್ಮದ ಕೆರೆತಕ್ಕೆ ಶೇಕಡಾ 10ರ ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ ದ್ರಾವಣ ಹಾಕಿದರೆ ಅದು ಚರ್ಮದ ಅವಶೇಷವನ್ನು ಕರಗಿಸಿ ನುಸಿ ಚೆನ್ನಾಗಿ ಕಾಣುವಂತೆ ಮಾಡುತ್ತದೆ. ಇದನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿ ರೋಗವನ್ನು ಖಾತ್ರಿಮಾಡಿಕೊಳ್ಳಬಹುದು.

	ನಾಯಿಗಳಲ್ಲಿ ಅದರಲ್ಲೂ ಮೈತುಂಬ ಉದ್ದ ಕೂದಲಿರುವ ಜಾತಿಗಳಲ್ಲಿ ಕೂದಲನ್ನು ಕತ್ತರಿಸುವುದು ಬಹುಮುಖ್ಯ. ಸಾಬೂನು ಉಪಯೋಗಿಸಿ ಸ್ನಾನ ಮಾಡಿಸುವುದರಿಂದ ಚರ್ಮ ಮೃದುವಾಗಿ, ಹೆಕ್ಕಳಿಕೆಗಳು ಉದುರಿ ಮುಂದೆ ಹಚ್ಚುವ ಔಷಧ ನುಸಿಗಳನ್ನು ತಲುಪಲು ಸಹಾಯಕವಾಗುತ್ತವೆ. ಹೆಚ್ಚಿನ ನುಸಿಗಳು ಚರ್ಮದೊಳಗಿರುವುದರಿಂದ ಔಷಧವನ್ನು ಬಿರುಸಾಗಿ ಉಜ್ಜಬೇಕು. ಔಷಧ ಹಚ್ಚುವುದರ ಜೊತೆಗೆ ಪೌಷ್ಟಿಕ ಆಹಾರ ಕೊಡಬೇಕು.

	ಸುಣ್ಣ ಮತ್ತು ಗಂಧಕ ಮಿಶ್ರಣದಲ್ಲಿ ರೋಗತಪ್ತ ನಾಯಿಗಳನ್ನು ಅದ್ದುವುದು ಸಾರ್ಕಾಪ್ಟಿಕ್ ನುಸಿಗಳಿಂದಾದ ಕಜ್ಜಿ ಚಿಕಿತ್ಸೆಗೆ ಒಂದು ಯೋಗ್ಯ ವಿಧಾನ. ಆದರೆ ಎಲ್ಲಾ ನುಸಿಗಳು ಸಾಯುವಂತೆ ಮಾಡಲು ಹಲವಾರು ದಿನ ಈ ಚಿಕಿತ್ಸೆ ಮುಂದುವರಿಸಬೇಕು. ಬೆಂಜೈಲ್ ಬಿಂಜೋಯೆಟ್ ದ್ರಾವಣ ಹೊರ ಮೈಗೆ ಹಚ್ಚಲು ಉತ್ತಮವಾದ ಒಂದು ಔಷಧ. ಇದರ 25% ಅಥವಾ 50% ದ್ರಾವಣವನ್ನು ಒಂದೇ ಆಗಿಯಾಗಲಿ ಇತರ ನುಸಿನಾಶಕಗಳೊಂದಿಗೆ ಬೆರಸಿಯಾಗಲಿ ಉಪಯೋಗಿಸಬಹುದು. ಸಾಮಾನ್ಯವಾಗಿ ಕಜ್ಜಿ ಮೈಯಿಯ ಎಲ್ಲಾ ಭಾಗಗಳಿಗೂ ಹರಡುವುದರಿಂದ ಮುಲಾಮುಗಳನ್ನು ಹಚ್ಚುವುದಕ್ಕಿಂತ ದ್ರಾವಣದಲ್ಲಿ ಇಡೀ ನಾಯಿಯನ್ನು ಅದ್ದುವುದು ಉತ್ತಮ.

	ಡಿಮೊಡೆಕ್ಟಿಕ್ ಕಜ್ಜಿ ಸುಲಭವಾಗಿ ವಾಸಿಯಾಗದ ವ್ಯಾಧಿ. ಚಿಕಿತ್ಸೆಗೆ ಇದರ ಪ್ರತಿಕ್ರಿಯೆ ಅಲ್ಪ. ಬೆಂಜೈಲ್ ಬಿಂಜೋಯೇಟ್ ದ್ರಾವಣವನ್ನು ಹಚ್ಚಿ ಚೆನ್ನಾಗಿ ತಿಕ್ಕಬೇಕು. ಈ ರೀತಿ ಒಂದು ವಾರ ಹಚ್ಚಿ ಒಂದು ವಾರ ಬಿಡುವು ಕೊಟ್ಟು ಮತ್ತೆ ಹಚ್ಚಬೇಕು. ಅನಂತರ ಪೂರ್ಣ ಗುಣವಾಗುವ ತನಕ ಮೂರು ದಿನಗಳಿಗೊಂದು ಬಾರಿಯಂತೆ ಔಷಧ ಹಚ್ಚುತ್ತಿರಬೇಕು.
(ಕೆ.ಎಸ್.ಪಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ